ಮುಬಾರಕ್ ಷಾ, ಕುತುಬ್ ಉದ್‍ದೀನ್ - 
	 ಖಲ್ಜಿ ವಂಶದ ಕೊನೆಯ ಸುಲ್ತಾನ (1316-20). ಅಲ್ಲಾವುದ್ದೀನ್ ಖಲ್ಜಿಯ ಮೂರನೆಯ ಮಗ ಅಲ್ಲಾವುದ್ದೀನನ ಮರಣಾನಂತರ ಮಲ್ಲಿಕ್ ಕಾಪೂರ್ ಇವನನ್ನು ಸೆರೆಯಲ್ಲಿಡಿಸಿ ಕೊಲ್ಲಿಸಲು ಏರ್ಪಾಡು ಮಾಡಿದ. ಮುಬಾರಕ್ ಲಂಚಕೊಟ್ಟು ಕಾಪೂರನನ್ನೂ ತನ್ನ ತಮ್ಮನನ್ನು ಕೊಲ್ಲಿಸಿ ಸುಲ್ತಾನನಾದ (1316). ತನ್ನ ಆಳ್ವಿಕೆಯ ಆರಂಭ ಕಾಲದಲ್ಲಿ ಈತ ಔದಾರ್ಯದಿಂದಲೇ ವರ್ತಿಸುತ್ತಿದ್ದ. ತನ್ನ ತಂದೆ ಜಾರಿಗೆ ತಂದಿದ್ದ ಕಠೋರ ನಿಯಮಗಳನ್ನು ಸಡಿಲಿಸಿ ಸೆರೆಯಾಳುಗಳಿಗೆ ಸಾರ್ವತ್ರಿಕ ಕ್ಷಮಾದಾನ ಮಾಡಿ ಅವರನ್ನು ವಿಮೋಚನೆಗೊಳಿಸಿದ. ಆದರೆ ಸ್ವಲ್ಪ ಕಾಲದಲ್ಲೇ ಈತ ಕುಡಿತ ವ್ಯಭಿಚಾರಗಳಲ್ಲಿ ಆಸಕ್ತನಾಗಿ ಖುಸ್ರು ಎಂಬ ಗುಲಾಮನ ಕೈಗೆ ರಾಜ್ಯಸೂತ್ರವನ್ನೊಪಿಸಿದ. ಈತನಲ್ಲಿ ದುರಹಂಕಾರವೂ ಕ್ರೌರ್ಯವೂ ಮನೆಮಾಡಿ ಕೊಂಡಿದ್ದವು. ಖುಸ್ರು ಕ್ರಮೇಣ ತನ್ನ ಪ್ರಭಾವ ಬೆಳೆಸಿಕೊಂಡ ಅವನ ಕಡೆಯವರು ಅಧಿಕ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿಕೊಂಡರು. ಕೊನೆಗೆ ಈತ 1320ರಲ್ಲಿ ಮುಬಾರಕನನ್ನೇ ಕೊಲ್ಲಿಸಿದ.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ